ಭೂಪಾತ ಮತ್ತು ಶಿಲಾಪಾತ

	ಸಾಪೇಕ್ಷವಾಗಿ ಶುಷ್ಕವಾಗಿರುವ ಮಣ್ಣು. ಶಿಲೆ ಇಲ್ಲವೆ ಇವೆರಡರಿಂದಲೂ ಒಡಗೂಡಿದ ರಾಶಿ ಗುರುತ್ವ ಬಲದ ಕಾರಣ ಕೆಳಮುಖವಾಗಿ ಜಾರುವ ಇಲ್ಲವೆ ಬೀಳುವ ವಿದ್ಯಮಾನ (ಲ್ಯಾಂಡ್ ಸ್ಲೈಡ್; ಲ್ಯಾಂಡ್ ಫಾಲ್; ಲ್ಯಾಂಡ್ ಸ್ಲಿಪ್; ಸ್ಲಂಪ್). ಭೂ ಕುಸಿತ ಎಂದೂ ಕರೆಯುವುದಿದೆ. ಎತ್ತರ ಪರ್ವತ ಪ್ರದೇಶಗಳಲ್ಲಿಯ ಕಡಿದಾದ ಪಕ್ಕಗಳಿರುವೆಡೆಗಳಲ್ಲಿ ಹಾಗೂ ನದಿ ಮತ್ತು ಸಮುದ್ರ ತೀರಗಳಲ್ಲಿ ಭೂಪಾತಗಳು ಸಾಮಾನ್ಯ. ಆಧುನಿಕ ಜೀವಿಕಲ್ಪದಲ್ಲಿ ಆಲ್ಟ್ಸ್ ಹಿಮಾಲಯ, ರಾಕೀಸ್ ಮತ್ತು ಆಂಡೀಸ್ ಮೊದಲಾದ ಪರ್ವತ ಪ್ರದೇಶಗಳಲ್ಲಿ ಹಿಮನದಿಗಳ ಪ್ರಾಬಲ್ಯ ಹೆಚ್ಚು. ಬಿಸಿಲಿನ ಹೊಡೆತಕ್ಕೆ ಕರಗಿ ನೀರು ಇಲ್ಲದೆ ಅಂಥ ಪ್ರದೇಶಗಳ ಮೇಲೆ ಬೀಳುವ ಮಳೆಯ ನೀರು ಅಲ್ಲಿಯ ಶಿಲೆಗಳಲ್ಲಿಯ ಬಿರುಕುಗಳ ಹಾಗೂ ಪದರಗಳ ಮೂಲಕ ಇಳಿದುಬರುತ್ತದೆ. ಹೀಗಾದಾಗ ಕೆಳಗಿರುವ ಗಟ್ಟಿಕಲ್ಲಿನ ಮೇಲೆ ಶೇಖರವಾಗಿರುವ ಚೂರುಗಲ್ಲು ಮತ್ತು ಮಣ್ಣಿನರಾಶಿ ನೀರಿನಿಂದ ನೆನೆದು ರಾಶಿಯ ತೂಕ ಹೆಚ್ಚುತ್ತದೆ. ಇದರಿಂದ ಮೇಲಿನ ರಾಶಿ ನಿಧಾನವಾಗಿ ಕೆಳಕ್ಕೆ ಜಾರುತ್ತ ಹೋಗುತ್ತದೆ. ಈ ಕ್ರಿಯೆಗೆ ನೆಲಕುಸಿತ (ಸಾಯಿಲ್ ಕ್ರೀಪ್) ಎಂದು ಹೆಸರು. ಭೂಕಂಪನ ಸಂಭವಿಸಿದಾಗ ಭೂಮಿಯ ಮೇಲೆ ಇರುವ ಕಲ್ಲುಮಣ್ಣಿನ ರಾಶಿಯೊಡನೆ ಅಡಿಗಲ್ಲೂ ಕೂಡಿಕೊಂಡು ಬರಲು ರಭಸದಿಂದ ಕೆಳಕ್ಕೆ ಜಾರಿ ಬರುತ್ತದೆ. ಈ ಕ್ರಿಯೆಯೇ ಭೂಪಾತ. ಇಂಥ ಭೂಪಾತಗಳ ಮಾರ್ಗಮಧ್ಯದಲ್ಲಿಯ ಜನವಸತಿ ಪ್ರದೇಶಗಳಿಗೆ ಆಗುವ ಹಾಸಿ ಬಲು ಅಪಾರ. 

	ಯುಕ್ತ ಆಧಾರ ಇಲ್ಲದಿರುವ ಹಾಗೂ ಜಾರುವಂಥ ಮೇಲ್ಭಾಗ ನೆಲಕುಸಿತ ಮತ್ತು ಭೂಪಾತಗಳಿಗೆ ಅವಕಾಶಮಾಡಿಕೊಡುತ್ತದೆ. ಛಿದ್ರಗಳು ಇಲ್ಲವೆ ಬಿರುಕುಗಳಿರುವ ಶಿಲೆಗಳ ಕೆಳಗೆ ಮೆದುಮಣ್ಣಿನ ರಾಶಿ ಇಲ್ಲವೆ ಪದರಗಳು ಅಡಿಗಳಲ್ಲಿನ ಮೇಲೆ ನಿಂತಿರುವ ಸಂಧರ್ಭಗಳು ಇಂಥಲ್ಲೆಲ್ಲ ಭೂಪಾತಗಳಾಗುವ ಸಾಧ್ಯತೆ ಹೆಚ್ಚು. ಕೊಲರೇಡೋ, ಕೊಲಂಬಿಯ ಪ್ರಸ್ಥಭೂಮಿಗಳಲ್ಲಿಯ ಪ್ರಸ್ತರ ಶಿಲೆಗಳಾಗಲಿ, ಲಾವಾಶಿಲೆಗಳಾಗಲಿ ಶೇಖರಣೆಗೊಂಡಿರುವ ಪ್ರದೇಶಗಳಲ್ಲಿ ಸುಮಾರು 330ಮೀ. ಎತ್ತರ ಹಾಗು ಸುಮಾರು 1.5ಕಿಮೀ ಉದ್ದ ಇರುವ ಕಲ್ಲಿನ ರಾಶಿ ವೇಗದಿಂದ ಮೇಲಿಂದ ಕೆಳಕ್ಕೆ ಬೀಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನಲಾಗಿದೆ. ನೀರಿನ ಅಡಿಯಲ್ಲಿಯ ನೆಲವೂ ಕುಸಿದು ಬೀಳುವುದುಂಟು. ಆ ಸಂದರ್ಭದಲ್ಲಿ ಕಲ್ಲಿನ ಚೂರುಗಳೂ ಮಣ್ಣು ನೀರಿನೊಡನೆ ಬೆರೆತು ಕೆಸರು ನೀರಿನ ಪ್ರವಾಹ (ಟರ್ಬಿಡಿಟಿ ಕರೆಂಟ್) ಉಂಟಾಗುತ್ತದೆ. ಇಂಥ ನೀರಿನ ಸಾಂದ್ರತೆ ತಿಳಿನೀರಿಗಿಂತಲೂ ಅಧಿಕವಾಗಿರುವುದರಿಂದ ಇದು ಸಾಗರ ತಳದಲ್ಲಿರುವ ಇಳಿಜಾರುಗಳ ಕೆಳಗೆ ಬಲು ಬಿರುಸಿನಿಂದ ಜಾರಿ ಹೋಗುತ್ತದೆ.

	ಭೂಪಾತಗಳಿಂದ ಆಗುವ ಹಾವಳಿಯನ್ನು ತಡೆಗಟ್ಟಲು ಭೂವಿಜ್ಞಾನಿಗಳು ಹಾಗೂ ಎಂಜಿನಿಯರುಗಳು ಸತತ ಪ್ರಯತ್ನಗಳನ್ನು ನಡೆಸುತ್ತ ಬಂದಿದ್ದಾರೆ. ಭೂಪಾತಗಳು ಸಂಭವಿಸುವ ಎಡೆಗಳಲ್ಲಿ ಕಾಂಕ್ರೀಟನ ದಪ್ಪಗೋಡೆಗಳನ್ನು ನಿರ್ಮಿಸುವುದು, ಆ ಪ್ರದೇಶದ ನೀರಾವರಿ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಉತ್ತಮಗೊಳಿಸುವುದು ಮೊದಲಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
(ಎ. ಎನ್. ಎಸ್. ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ